Current Date 15 May, 2026

ಇತ್ತೀಚೆಗೆ ಸಿನಿಮಾ ನೋಡೋರಿಗಿಂತ ಸಿನಿಮಾ ಮಾಡೋರ ಸಂಖ್ಯೆ ಹೆಚ್ಚಾಗಿದೆ

ರಿಷಬ್ ಶೆಟ್ಟಿ ಸದ್ಯ 'ಕಾಂತಾರ: ಚಾಪ್ಟರ್ 1'ರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆನೇ ಸಿನಿಮಾ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಸದ್ಯ ರಿಷಬ್ ಶೆಟ್ಟಿ ನಿರ್ಮಿಸಿರುವ 'ಶಿವಮ್ಮ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ರಿಷಬ್ ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಿದ್ದರೂ, ಕಂಟೆಂಟ್ ಬೇಸ್ಡ್ ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ.


ಇದೀಗ 'ಶಿವಮ್ಮ' ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ. ಜೈ ಶಂಕರ್ ಆರ್ಯರ್ ನಿರ್ದೇಶಿಸಿದ ಸಿನಿಮಾ ಉತ್ತರ ಕರ್ನಾಟಕದ ಕಥೆಯನ್ನು ಹೊತ್ತು ತಂದಿದೆ. ಯರೆಹಂಚಿನಾಳ ಎನ್ನುವ ಊರಿನಲ್ಲಿ ನಡೆಯುವ ಕಥೆಯೇ ಈ ಸಿನಿಮಾದ ಜೀವಾಳ. ಅಷ್ಟೇ ಅಲ್ಲದೆ ಆ ಊರಿನ ಜನರನ್ನು ಬಳಸಿಕೊಂಡು ಈ ಸಿನಿಮಾವನ್ನು ಮಾಡಿರುವುದು ವಿಶೇಷ. ಇನ್ನೇನು ಸಿನಿಮಾ ಬಿಡುಗಡೆಯಾಗುತ್ತಿರುವ ಈ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಜನರು ಸಿನಿಮಾ ನೋಡುವುದಕ್ಕೆ ಥಿಯೇಟರ್‌ಗೆ ಯಾಕೆ ಬರುತ್ತಿಲ್ಲ ಅನ್ನೋದನ್ನು ಹೇಳಿದ್ದಾರೆ. ಶಿವಮ್ಮ ಇದೇ ಜೂನ್ 14ರಂದು ಕೆಲವು ಆಯ್ದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇತ್ತೀಚೆಗೆ ಕಮರ್ಷಿಯಲ್ ಸಿನಿಮಾ ನೋಡುವುದಕ್ಕೆ ಜನರು ಚಿತ್ರಮಂದಿರಕ್ಕೆ ಬರುವುದು ಕಡಿಮೆ ಆಗಿದೆ. ಅದೇ ಇಂತಹ ಎಕ್ಸ್‌ಪೆರಿಮೆಂಟ್ ಸಿನಿಮಾಗೆ ಹೇಗೆ ಪ್ರತಿಕ್ರಿಯೆ ಕೊಡುತ್ತಾರೋ ಆ ಕುತೂಹಲವಂತೂ ಇದೆ. ಇತ್ತ ಜನರು ಥಿಯೇಟರ್‌ಗೆ ಬೇರೆ ಬರುತ್ತಿಲ್ಲ. ಸಿನಿಮಾ ನೋಡುವವರಿಗಿಂತ ಸಿನಿಮಾ ಮಾಡುವವರ ಸಂಖ್ಯೆ ಹೆಚ್ಚಾಗಿರುವುದೇ ಇದಕ್ಕೆಲ್ಲ ಕಾರಣ ಅಂತ ರಿಷಬ್ ಶೆಟ್ಟಿ ಹೇಳಿದ್ದಾರೆ.